ಬಿಜೆಪಿ ಪಕ್ಷದಲ್ಲಿ ಬಿಲ್ಲವ ವ್ಯಕ್ತಿಯಿಂದ ತೆರವಾದ ವಿಧಾನ ಪರಿಷತ್ ಸ್ಥಾನವನ್ನು ಬಿಜೆಪಿ ಪಕ್ಷದಲ್ಲಿ ಇರುವ ಬಿಲ್ಲವ ಸಮಾಜದ ವ್ಯಕ್ತಿಗೆ ನೀಡಿ ಸಮಾಜಕ್ಕೆ ರಾಜಕೀಯ ನ್ಯಾಯ ನೀಡುತ್ತಾ ಅಥವಾ ಕಾಂಗ್ರೆಸ್ ಪಕ್ಷದಂತೆ ಬಿಲ್ಲವ ಸಮಾಜದಿಂದ ಕಿತ್ತು ಬೇರೆ ಸಮುದಾಯಕ್ಕೆ ನೀಡುತ್ತಾ?
ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಬಿಲ್ಲವ ಈಡಿಗ ಸಮುದಾಯದವರದ್ದು. ಮತಗಳ ವಿಷಯದಲ್ಲಿ ಕೂಡ ಈ ನಾಲ್ಕು ಜಿಲ್ಲೆಗಳಲ್ಲಿ ಬಿಲ್ಲವ ಈಡಿಗ ಸಮುದಾಯದವರದ್ದೆ ಹೆಚ್ಚು. ಆದರೆ ಭಾರತೀಯ ಜನತಾ ಪಕ್ಷ ಕಳೆದ 35 ವರ್ಷಗಳಲ್ಲಿ ಈ ಹಿಂದುಳಿದ ವರ್ಗಕ್ಕೆ ಒಂದೇ ಒಂದು ಟಿಕೆಟ್ ನೀಡದೆ ಕೇವಲ ಮೇಲ್ವರ್ಗಕ್ಕೆ ಮಣೆ ಹಾಕಿತ್ತು. ಬಿಲ್ಲವ ಈಡಿಗರು ಹಿಂದುತ್ವವನ್ನು ನಂಬಿ ಮತ ಹಾಕಿದ್ದರು. ವಿರುದ್ಧವಾಗಿ ತಮ್ಮ ಜಾತಿಯವ ನಿಂತರೂ ಕೂಡ ದೇಶ ಧರ್ಮ ಹಿಂದುತ್ವಕ್ಕಾಗಿ ಮತ ಚಲಾಯಿಸಿದ್ದರು. ಕಾಲಕ್ರಮೇಣ ಇದು ಈ ಸಮುದಾಯದವರ ದೌರ್ಬಲ್ಯವಾಗಿ ಮಾರ್ಪಾಡಾಯಿತೊ ಏನೊ? ಈ ಸಮುದಾಯ ಸಂಖ್ಯೆಗೆ ತಕ್ಕದಾದ ಸಾಮಾಜಿಕ ಆರ್ಥಿಕ ರಾಜಕೀಯ ಅಧಿಕಾರ ಕಳೆದುಕೊಂಡಿತು ಎಂಬ ಅಳಲು ಸಮುದಾಯದ ಹಿರಿಯರು ಹಾಗೂ ಮುಖಂಡರದಾಯಿತು.
ಕಾಂಗ್ರೆಸ್ ಪಕ್ಷದಲ್ಲಿ ಬಿಲ್ಲವ ಸಮಾಜದ ಹರೀಶ್ ಕುಮಾರ್ ಅವರಿಂದ ತೆರವಾದ ಎಂಎಲ್ಸಿ ಸ್ಥಾನಕ್ಕೆ ಕ್ರೈಸ್ತ ಸಮುದಾಯದ ಐವನ್ ಡಿಸೋಜಾ ರವರಿಗೆ ನೀಡುವ ಮೂಲಕ ಬಿಲ್ಲವ ಸಮಾಜಕ್ಕಿದ್ದ ಎಂ ಎಲ್ ಸಿ ಸ್ಥಾನವನ್ನು ಕಿತ್ತುಕೊಂಡು ಅನ್ಯಾಯ ಮಾಡಿದೆ. ಇತ್ತ ಬಿಜೆಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಎಂಎಲ್ಸಿ ಸ್ಥಾನಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದಿಲ್ಲಿಯಲ್ಲಿ ಲಾಬಿ ಮಾಡುತ್ತಿರುವುದು ಬಹಿರಂಗಗೊಂಡಿದೆ.
ಕೋಟಾ ಶ್ರೀನಿವಾಸ ಪೂಜಾರಿಯವರ ಮೇಲ್ಮನೆ ವಿಪಕ್ಷ ನಾಯಕ ಸ್ಥಾನ ದೊಡ್ಡ ಹುದ್ದೆಯಾಗಿದ್ದು ಬಿಲ್ಲವ ಈಡಿಗ ಸಮಾಜಕ್ಕೆ ಸಿಕ್ಕ ದೊಡ್ಡ ಗೌರವವಾಗಿತ್ತು. ಸಂಸದ ಸ್ಥಾನಕ್ಕೆ ಅವಕಾಶ ಕೊಟ್ಟಿರುವುದು ದೊಡ್ಡ ಸ್ಥಾನವನ್ನು ಕಿತ್ತುಕೊಂಡು ಚಿಕ್ಕ ಸ್ಥಾನ ನೀಡಿದ ರೀತಿ ಸಮಾಜದ ಅನುಭವಕ್ಕೆ ಬಂದಿತ್ತು. ನಾಲ್ಕು ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನು ಬಿಲ್ಲವ ಈಡಿಗರಿಗೆ ನೀಡಬೇಕೆಂಬ ಇಚ್ಚೆ ಇದ್ದಿದ್ದರೆ ವಿಪಕ್ಷ ನಾಯಕ ಹುದ್ದೆಯನ್ನು ಮುಂದುವರಿಸಿ ಇನ್ನೊಬ್ಬ ಬಿಲ್ಲವ ಈಡಿಗ ನಾಯಕನಿಗೆ ಅವಕಾಶ ಕೊಟ್ಟಿದ್ದರೆ ಬಿಲ್ಲವ ಈಡಿಗ ಸಮಾಜಕ್ಕೆ ನ್ಯಾಯ ನೀಡಿದ ಹಾಗೆ ಆಗುತ್ತಿತ್ತು. ಲಿಂಗಾಯತರು ಹೆಚ್ಚಿರುವ ಕ್ಷೇತ್ರದಲ್ಲಿ ಲಿಂಗಾಯತರಿಗೆ, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಒಕ್ಕಲಿಗರಿಗೆ, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಲಾಗುತ್ತದೆ. ಆದರೆ ಬಿಲ್ಲವ ಈಡಿಗರು ಹೆಚ್ಚಿರುವ ಕ್ಷೇತ್ರಗಳಲ್ಲಿ ಯಾಕೆ ಬಿಲ್ಲವರನ್ನು ಕಡೆಗಣಿಸಲಾಗುತ್ತದೆ ಎಂಬ ಪ್ರಶ್ನೆ ಮಾತ್ರ ಸಮುದಾಯಕ್ಕೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ?
ಬಿಲ್ಲವರು ಬಿಜೆಪಿಯವರಲ್ಲಿ ಈ ಪ್ರಶ್ನೆಯನ್ನು ಕೇಳಲು ಕೂಡ ಕಾರಣ ಇದೆ. ಬಿಜೆಪಿಯ ಮತ್ತು ಸಂಘ ಪರಿವಾರದ ಬೆನ್ನೆಲುಬಿನ ರೀತಿಯಲ್ಲಿ ಸಮಾಜ ಹಲವಾರು ವರ್ಷಗಳಿಂದ ಹಿಂದೆ ನಿಂತಿದೆ. ಹೊಡೆದಾಟ ಬಡಿದಾಟ ಪೋಸ್ಟರ್ ಹಚ್ಚುವ ಬಂಟಿಂಗ್ಸ್ ಕಟ್ಟುವ ಜನ ಒಗ್ಗೂಡಿಸುವ ಹಾಗೂ ಸಂಘಟನೆ ಮಾಡುವ ಮನೆಮನೆ ತಿರುಗುವ ಕೆಲಸವನ್ನು ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿರುವ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಸತ್ತ ಹುಡುಗರಲ್ಲಿ 30ಕ್ಕಿಂತ ಹೆಚ್ಚಿನ ಹುಡುಗರು ಬಿಲ್ಲವರು. ತಮ್ಮ ಜಾತಿಯವರನ್ನು ಸಹ ನೋಡದೆ ಬಿಜೆಪಿ ಬೆಂಬಲಿಸಿದ್ದಾರೆ. ಆದರೆ ಅಧಿಕಾರ ನೀಡುವ ವ್ಯವಸ್ಥೆ ಬಂದಾಗ ಬಿಲ್ಲವರನ್ನು ಸಂಪೂರ್ಣ ಕಡೆಗಣಿಸಲಾಗುತ್ತದೆ. ಹಾಗೆ ನೋಡಿದರೆ ಕಾಂಗ್ರೆಸ್ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿತ್ತು. ಒಂದು ಸಮಯದಲ್ಲಿ ಈಡಿಗ ಬಿಲ್ಲವ ಸಮಾಜದ ನಾಲ್ಕು ನಾಲ್ಕು ಸಂಸದರು ದೆಹಲಿಯಲ್ಲಿರುತ್ತಿದ್ದರು. ಆರೇಳು ಶಾಸಕರಿರುತಿದ್ದರು. ಕೇಂದ್ರ ಸಚಿವ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ ಜನಾರ್ಧನ ಪೂಜಾರಿಯೆಂಬ ಮೇರು ನಾಯಕತ್ವ ಸಮಾಜಕ್ಕೆ ಸಿಕ್ಕಿತ್ತು. ನಂತರದ ದಿನಗಳಲ್ಲಿ ಹಿಂದುತ್ವಕ್ಕೆ ಮಾರುಹೋದ ಬಿಲ್ಲವ ಈಡಿಗ ಸಮಾಜಕ್ಕೆ ಸಿಕ್ಕಿದ್ದೇನು ಎಂಬ ಬಹುದೊಡ್ಡ ಪ್ರಶ್ನೆ ಸಮಾಜವನ್ನು ಕಾಡುತ್ತಿದೆ.
ಬಿಲ್ಲವ ಈಡಿಗ ಸಮಾಜದ ಒಳ್ಳೆಯತನವನ್ನು ಸಮಾಜದ ದೌರ್ಬಲ್ಯವಾಗಿ ಪರಿಗಣಿಸದೆ ಕೋಟ ಶ್ರೀನಿವಾಸ ಪೂಜಾರಿಯವರ ತೆರವಾದ ಸ್ಥಾನ ಬಿಲ್ಲವ ಈಡಿಗರಿಗೆ ಪುನಃ ನೀಡಬೇಕೆನ್ನುವುದು ವಿವಿಧ ಬಿಲ್ಲವ ಈಡಿಗ ಸಂಘಟನೆಗಳ ಒಕ್ಕೊರಲ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಹೊರಡಾಡುತ್ತಿದೆ.
ಈ ಸ್ಥಾನವನ್ನು ಬೇರೆ ಯಾವುದೇ ಸಮುದಾಯಕ್ಕೆ ನೀಡಿದರೆ ಬಿಜೆಪಿಗೆ ಒಂದು ದೊಡ್ಡ ಹೊಡೆತ ಬೀಳುವುದಂತೂ ನಿಶ್ಚಿತ.
ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಬಿಜೆಪಿ ಬಿಲ್ಲವ ಸಮಾಜದಿಂದ ತೆರವಾದ ಸ್ಥಾನಕ್ಕೆ ಸೂಕ್ತ ಬಿಲ್ಲವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿ ಸಮಾಜದ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡಲು ನಿಶ್ಚಯಿಸಿದ್ದಾರೆ.