ರಾಷ್ಟ್ರೀಯ

ಬಹುನಿರೀಕ್ಷೆಯ ವಂದೇಭಾರತ್ ಸ್ವೀಪರ್ ರೈಲುಗಳ ಅನಾವರಣ

Vande Bharath Train

ಬಹುನಿರೀಕ್ಷಿತ ‘ವಂದೇ ಭಾರತ್‌’ ಸ್ಲೀಪರ್‌ ರೈಲು ಭಾನುವಾರ ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಇದನ್ನು ಅನಾವರಣಗೊಳಿಸಿದರು. ಈವರೆಗೆ ಚೇರ್‌ಕಾರ್‌ ವಂದೇಭಾರತ್‌ ರೈಲುಗಳು ಹಗಲಿನಲ್ಲಿ ಮಾತ್ರ ಸಂಚರಿಸುತ್ತಿದ್ದವು. ಆದರೆ ಸ್ಲೀಪರ್‌ ರೈಲುಗಳು ದೂರದ ಊರುಗಳಿಗೆ ರಾತ್ರಿ ವೇಳೆಯೂ ಸಂಚರಿಸಲಿವೆ.

ಬಿಇಎಂಎಲ್‌ ನಿರ್ಮಿಸಿರುವ 16 ಬೋಗಿಗಳ ವಂದೇ ಭಾರತ್‌ ಸ್ಲೀಪರ್‌ ರೈಲು ಸದ್ಯ ಬೆಂಗಳೂರಿನಲ್ಲಿ ಇದ್ದು, ಶೀಘ್ರವೇ ಚೆನ್ನೈಗೆ ರವಾನೆ ಆಗಲಿದ್ದು, ಅಲ್ಲಿ 2ರಿಂದ 3 ತಿಂಗಳ ಕಾಲ ತಪಾಸಣೆ ಆಗಲಿದೆ ಹಾಗೂ ಪ್ರಾಯೋಗಿಕ ಸಂಚಾರ ಆಗಲಿದೆ. ಸುರಕ್ಷತೆ ಸಾಬೀತಾದ ಬಳಿಕ ರೈಲಿಗೆ ಅಧಿಕೃತ ಹಸಿರು ನಿಶಾನೆ ತೋರಿಸಲಾಗುತ್ತದೆ. ‘ಅಧಿಕೃತ ಆರಂಭಕ್ಕೆ 3 ತಿಂಗಳು ಹಿಡಿಯಲಿದೆ’ ಎಂದು ಸಚಿವ ವೈಷ್ಣವ್‌ ಹೇಳಿದ್ದಾರೆ.

2 ಮೂಲ ಮಾದರಿ ಸಿದ್ಧ:

2023ರಲ್ಲಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್‌) ಬಿಇಎಂಎಲ್‌ಗೆ 10 ವಂದೇ ಭಾರತ್‌ ಸ್ಲೀಪರ್‌ ರೈಲನ್ನು ನಿರ್ಮಿಸುವಂತೆ ಕಾರ್ಯಾದೇಶ ನೀಡಿತ್ತು. ಅದರಂತೆ ಇದೀಗ 2 ಮೂಲಮಾದರಿ (ಪ್ರೋಟೋಟೈಪ್‌) ರೈಲು ನಿರ್ಮಾಣವಾಗಿದೆ. ಶೀಘ್ರದಲ್ಲೇ ರೈಲನ್ನು ಚೆನ್ನೈನ ಐಸಿಎಫ್‌ಗೆ ಕಳಿಸಲಾಗುವುದು. ಐಸಿಎಫ್‌ ಸುಮಾರು 15-20 ದಿನ ಪರೀಕ್ಷೆ ನಡೆಸಲಿದ್ದು, ಲಖನೌ ರೈಲ್ವೆ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಮೇಲ್ವಿಚಾರಣೆ ನಡೆಸಲಿದೆ. 2 ತಿಂಗಳು ವಾಯವ್ಯ ರೈಲ್ವೆ ವಲಯದಲ್ಲಿ ರೈಲಿನ ಪ್ರಾಯೋಗಿಕ ಸಂಚಾರ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಂದೇ ಭಾರತ್ ಸ್ಲೀಪರ್‌ ವಿಶೇಷ

ಐಷಾರಾಮಿ ಏರ್‌ಕ್ರಾಫ್ಟ್‌ ಮಾದರಿಯ ಸೌಲಭ್ಯವನ್ನು ಹೊಂದಿರುವ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 800ರಿಂದ 1200 ಕಿ.ಮೀ.ವರೆಗೂ ಸಂಚರಿಸಲಿದೆ.

ನಿದ್ರಿಸಲು ಆರಾಮದಾಯಕ ಮಂಚ, ವಿಶಾಲವಾದ ಸ್ಥಳಾವಕಾಶ, ಗಾಳಿ ಬೆಳಕು ಹೊಂದಿದೆ. ಯುಎಸ್‌ಬಿ, ಚಾರ್ಜಿಂಗ್‌ ವ್ಯವಸ್ಥೆ, ಮೊಬೈಲ್‌, ಮ್ಯಾಗ್ಸಿನ್‌ ಹೋಲ್ಡರ್‌, ಸ್ನ್ಯಾಕ್‌ ಟೇಬಲ್‌ ಇದೆ. ಬಿಸಿನೀರು ಸ್ನಾನದ ವ್ಯವಸ್ಥೆ ಇದೆ.

ವಿಶೇಷವಾಗಿ ಡ್ರೈವಿಂಗ್‌ ಟ್ರೈಲರ್‌ ಬೋಗಿಯಲ್ಲಿ ಆರ್‌ಪಿಎಫ್‌ ಸೇರಿ ಭದ್ರತಾ ಸಿಬ್ಬಂದಿಯ ಶ್ವಾನದಳ ತಂಗಲು ‘ಡಾಗ್‌ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕುನಾಯಿಗೂ ಇದನ್ನು ಕೊಡಲಾಗುತ್ತದೆ.

ಅಂಗವಿಕಲ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಶೌಚಾಲಯವೂ ಇದೆ.

ಆಟೋಮೆಟಿಕ್‌ ಡೋರ್‌, ಸೆನ್ಸರ್‌ ಆಧಾರಿತ ಅಂತರ್‌ ಸಂವಹನ ವ್ಯವಸ್ಥೆ, ಅಗ್ನಿ ಸುರಕ್ಷತಾ ಬಾಗಿಲು, ಲಗೇಜ್‌ ರೂಂ, ಓದಲು ದೀಪ, ರಾತ್ರಿಯಲ್ಲಿ ದೀಪ ಬಂದ್‌ ಆಗಿರುವಾಗ ಶೌಚಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಏಣಿಯ ಕೆಳಗೆ ಎಲ್‌ಇಡಿ ಲೈಟ್‌ ಕೊಡಲಾಗಿದೆ.

ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ಜೊತೆಗೆ ತ್ಯಾಜ್ಯದ ತೊಟ್ಟಿ ಇದೆ.

ಸ್ಟೀಲ್‌ ಬಾಡಿಯ ರೈಲು ಇದಾಗಿದ್ದು, ಅಪಘಾತವಾದರೂ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗದಂತೆ ಸುರಕ್ಷತಾ ವಿನ್ಯಾಸ ರೂಪಿಸಲಾಗಿದೆ. ಒಳಾಂಗಣದಲ್ಲಿ ಗ್ಲಾಸ್‌ ಫೈಬರ್‌ ರೈನ್‌ಫೋರ್ಸ್ಡ್ ಪ್ಲಾಸ್ಟಿಕ್ಸ್‌ ಬಳಸಲಾಗಿದೆ. ಏರೋಡೈನಾಮಿಕ್‌ ಡಿಸೈನ್‌ ಅಳವಡಿಸಿಕೊಳ್ಳಲಾಗಿದೆ. ಅಗ್ನಿ ಸುರಕ್ಷತಾ ವ್ಯವಸ್ಥೆಯಿದೆ.

ವಂದೇ ಭಾರತ್‌ ಸ್ಲೀಪರ್‌

ಬರ್ತ್ಸ್‌ ಬೋಗಿ ಆಸನ

ಎಸಿ 3 ಟೈರ್‌ ಬರ್ತ್ಸ್ 11 611

ಎಸಿ 2ಟೈರ್‌ ಬರ್ತ್ಸ್‌ 04 188

ಮೊದಲ ದರ್ಜೆ ಎಸಿ 01 24

ಒಟ್ಟು ಬೋಗಿ 16 823

Related posts

ನಾಳೆ ಭಾರತ್ ಬಂದ್

kudlaadmin

Leave a Comment